ರರಿಕ್, ನಿಕೊಲಾಯ್ ಕಾನ್‍ಸ್ಟಾಂಟಿನೋವಿಚ್
1874-1974. ರಷ್ಯದ ಪ್ರಸಿದ್ಧ ಚಿತ್ರಕಲಾವಿದ ಮತ್ತು ವಿದ್ವಾಂಸ, ರರಿಕ್ ನಿಕೊಲಾಸ್ ಕಾನ್‍ಸ್ಟಾನ್‍ಟಿನ್ ಎಂದೂ ಈತನನ್ನು ಸಂಭೋಧಿಸುವುದುಂಟು. ಸೇಂಟ್ ಪೀಟರ್ಸ್ ಬರ್ಗನಲ್ಲಿ ಜನಿಸಿದ. ಡೇನಿಷ್ ಮತ್ತು ನಾರ್ವೇಜಿಯನ್ ಬುಡಕಟ್ಟಿಗೆ ಸೇರಿದ ಇವನ ವಂಶಸ್ಥರು 18 ನೆಯ ಶತಮನದ ಪ್ರಥಮಾರ್ಧದಲ್ಲಿ ರಷ್ಯಕ್ಕೆ ಬಂದು ನೆಲೆಸಿದವರು. ನೋಟರಿಯಾಗಿದ್ದ ಇವನ ತಂದೆ ಸುಸಂಸ್ಕøತ ಜನಪ್ರಿಯ ವ್ಯಕ್ತಿಯಾಗಿದ್ದ.

	ರರಿಕ್ ಬಾಲ್ಯದಲ್ಲಿ ಐತಿಹಾಸಿಕ ಪುಸ್ತಕಗಳನ್ನು ಓದುವುದರಲ್ಲಿ ಪುರಾಣ ಕಥೆಗಳನ್ನು ಕೇಳುವುದರಲ್ಲಿ ಬಹು ಆಸಕ್ತಿ. ಸದಾ ಈತ ಪ್ರವಾಸ ಮಾಡುವ ಜಗತ್ತನ್ನು ನೋಡಬೇಕೆನ್ನುವ ಕನಸನ್ನು ಕಾಣುತ್ತಿದ್ದ. ಪುರಾತನ ರಷ್ಯದ ಬಗ್ಗೆ ಹೆಚ್ಚು ಆಸಕ್ತಿ ತಳೆದ ಈತ ವಿದ್ಯಾಭ್ಯಾಸ ಮಾಡುತ್ತಲೇ ಪ್ರಾಚೀನ ಭೂ ಸಂಶೋಧನೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಈ ಕಾಲದಲ್ಲಿ ಈತನ ಚಿತ್ರ ಕಲೆ ಸ್ಪಷ್ಟವಾಗಿ ರೂಪು ಪಡೆಯಲಾರಂಭಿಸಿತು.

	ಈತ 1893ರಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿ ಏಕಕಾಲದಲ್ಲಿ ಕಲೆ ಮತ್ತು ನ್ಯಾಯ ಶಾಸ್ತ್ರಗಳನ್ನು ಅಭ್ಯಾಸ ಮಾಡಲಾರಂಭಿಸಿದ. ಗತಕಾಲದ ಅದ್ಭುತಗಳ ಬಗ್ಗೆ ಈತನ ಆಸಕ್ತಿ ಬೆಳೆಯಿತಲ್ಲದೆ ಇತಿಹಾಸದ ವಿಭಾಗಕ್ಕೆ ಹೋಗಿ ಅಲ್ಲಿಯ ಬೋಧನೆಗಳನ್ನು ಕೇಳುತ್ತಿದ್ದ. ರಷ್ಯದ ಪ್ರಾಚೀನ ಇತಿಹಾಸ ಸಂಘದ ಸದಸ್ಯನಾಗಿ ಬೇಸಗೆಯ ಕಾಲವನ್ನು ಭೂಸಂಶೋಧನೆಗಳಲ್ಲಿ ಕಳೆಯುತ್ತಿದ್ದ.

	ರರಿಕ್ 1885ರಲ್ಲಿ ಸಾರ್ವಜನಿಕ ಗ್ರಂಥಾಲಯದ ಕಲಾವಿಭಾಗದ ಅಧಿಕಾರಿಯಾಗಿದ್ದ ವ್ಲಾದಿಮಿರ್ ಸ್ಟಾಸೋಫನ್ ಭೇಟಿಯ ಅನಂತರ ಪ್ರಾಚೀನ ಗ್ರಂಥಗಳ, ಕೈಬರೆಹಗಳ ಮತ್ತು ಘಟನೆಗಳನ್ನು ಕುರಿತು ಹೆಚ್ಚುಗಾಢವಾಗಿ ಅಭ್ಯಾಸಮಾಡತೊಡಗಿದ.

	ರರಿಕ್‍ನ ಮೇಲೆ ಚಿತ್ರಕಲಾ ಶಾಲೆಯ ಗುರುವಾದ ಕುಯಿನ್‍ಜಿಯವರ ಪ್ರಭಾವ ಅಪಾರವಾದುದ್ದು. ಈ ಕಲಾಶಾಲೆಯಲ್ಲಿ ರರಿಕ್ ಪ್ರಕೃತಿಯ ಸಹಜ ಭೂಚಿತ್ರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದನ್ನು ಪ್ರಾರಂಭಿಸಿದ. 1897ರಲ್ಲಿ ಕುಯಿನ್‍ಜಿಯವರನ್ನು ಕಲಾಶಾಲೆಯಿಂದ ತೆಗೆದುಹಾಕಲಾಯಿತು. ಇದನ್ನು ಪ್ರತಿಭಟಿಸಿದ. ಇತರರೊಡನೆ ರರಿಕ್ ಸಹ ಶಾಲೆಬಿಟ್ಟರೂ ಪ್ರಾಚೀನ ಸ್ಲಾವ್ ಜೀವನದ ಬಗ್ಗೆ ಚಿತ್ರಗಳನ್ನು ರಚಿಸಿ ಅದಕ್ಕೆ `ದಿ ಬಿಗಿನಿಂಗ್ ಆಫ್ ರಷ್ಯ ದಿಸ್ಲಾವ್ಸ್ ಎಂದು ಹೆಸರಿಟ್ಟ. ಈ ಚಿತ್ರಸರಣಿಯ ರರಿಕ್‍ನ ಮೂಲ ಕಲ್ಪನೆಯಾಗಿತ್ತು. ವ್ಶೆಜ್ಞಾನಿಕ ಭೂಸಂಶೋಧನೆಯ ಆಧಾರದ ಮೇಲೆ ಹಿಂದಿನದನ್ನು ಪುನರುತ್ಥಾನಗೊಳಿಸಿದರು ಚಾರಿತ್ರಿಕ ಘಟನೆಯನ್ನು ಮತ್ತೆ ಸೃಷ್ಟಿಸುವುದಾಗಿರಲಿಲ್ಲ. ಹಿಂದಿನ ಘಟನೆಗಳನ್ನು ಕಾವ್ಯಮಯ ಮಾಡುವುದೇ ರರಿಕ್‍ನ ಚಿತ್ರಕಲೆಯ ಮುಖ್ಯ ಕೆಲಸವಾಗಿತ್ತು. ಭಾವಾತ್ಮಕತೆ ಅಮೋಘ ಕಲ್ಪನೆಗಳಿಂದ ಈತ ಹಿಂದಿನ ಕಾಲದ ಘಟನೆಗಳಿಗೆ ತನ್ನದೇ ಆದ ಬಗೆಯಲ್ಲಿ ಇಂದ್ರಿಯಾನುಭವವನ್ನು ಚಿತ್ರಗಳ ಮೂಲಕ ನೀಡಿದ.

	`ದಿ ಹೆರಾಲ್ಡ್; ಕ್ಲಾನ್ ರೈಸಸ್ ಎಗೆನೆಸ್ಟ್ ಕ್ಲಾನ್ (1897, ಟಿ.ಜಿ.), ದಿ ಮೀಟಿಂಗ್ ಆಫ್ ದಿ ಎಲ್ಡರ್ಸ್ (1899. ಆರ್.ಎಂ.), ದಿ ಕ್ಯಾಂಪೆನ್ (1899) ಇವು ಈತನ ಪ್ರಥಮ ಸರಣಿ ಚಿತ್ರಗಳಲ್ಲಿ ಹೆಸರಾದವು. ಮುಂಬೆಳಗಿನ ವರ್ಣಗಳಿಂದ, ಮಂದಪ್ರಕಾಶನದ ಚಂದ್ರಮನಿಂದ ಕಲಾಕಾರ ಇಲ್ಲಿ ತೊಂದರೆಯ ತಡೆಗೆ ಮುಂಬರುವ ಕೆಟ್ಟಸುದ್ದಿಯ ತಡೆವ ತವಕ ತೋರಿದ್ದಾನೆ. ಪ್ಯಾರಿಸ್‍ನ ಪ್ರಸಿದ್ಧ ಕಲಾಕಾರನಾದ ಫರ್ನೆಂಡ್ ಕಾರ್ಮನ್ ಅವರ ಕಲಾಶಾಲೆಯಲ್ಲಿ ರರಿಕ್ ಕೆಲವು ಕಾಲ ಇದ್ದಾಗ ಐಡಲ್ಸ್ (1901, ಆರ್, ಎಂ.) ಮತ್ತು ಮರ್ಚೆಂಟ್ಸ್ ಪ್ರಮ್ ಓವರಿಸೀಸ್ (1901, ಟಿ.ಜಿ.; 1902 ಪ್ರತಿಕೃತಿ, ಆರ್.ಎಂ.) ಎಂಬ ಎರಡು ಕಲಾಕೃತಿಗಳನ್ನು ರಚಿಸಿದ.

	ಐಡಲ್ಸ್ ವರ್ಣಚಿತ್ರ ಒಂದು ಪೇಗನ್ (ಕ್ಷುದ್ರಧರ್ಮಿ) ದೇವಾಲಯ ಕುರಿತದ್ದು: ಬೇಲಿಯ ಹಿಂದೆ ಬಲಿಕೊಟ್ಟ ಪ್ರಾಣಿಗಳ ತಲೆಬುರಡೆಗಳಿಂದ ಅಲಂಕೃತವಾಗಿದೆ. ವಿಶಾಲವಾದ ಹರಡಿದ ಕಲ್ಲುಬೊಂಬೆಗಳ ಮಧ್ಯೆ ಒಬ್ಬ ಮುದಿ ಮಾಂತ್ರಿಕ ಯೋಚನಾಭರಿತನಾಗಿ ಓಡಾಡುತ್ತಿದ್ದಾನೆ. ಇದನ್ನು ನೋಡಿದಾಗ ಹಿಂದಿನ ಸ್ಲಾವನಿಕ್ ಜನಾಂಗದ ಮೂಢನಂಬಿಕೆಗಳು ಜೀವತಳೆದು ನಮ್ಮ ಕಣ್ಮುಂದೆ ನಿಂತು ಪುರಾತನ ರಹಸ್ಯಗಳ ಸಂವೇದನೆಯುಂಟಾಗುತ್ತದೆ. ಇಲ್ಲಿನ ಕಲಾವೈಶಿಷ್ಯ ರರಿಕ್‍ನ ಹಿಂದಿನ ಕಲಾಕೃತಿಗಳಿಂದ ಭಿನ್ನವಾದದ್ದು.

	ಮರ್ಚೆಂಟ್ಸ್ ಫ್ರಂ ಓವರ್‍ಸೀಸ್ ಚಿತ್ರದಲ್ಲಿ ರರಿಕ್‍ನ ಹೊಸ ಕಲ್ಪನಾವಿನ್ಯಾಸ ಸ್ಪಷ್ಟವಾಗುತ್ತದೆ ಹಾಗೂ ತನ್ನದೇ ಆದ ವಿಶಿಷ್ಟ ಚತುರ ಬಣ್ಣಗಾರ ಎಂಬುದು ಸರ್ವವಿದಿತವಾಗುತ್ತದೆ. ಈ ಆಕರ್ಷಕ ಚಿತ್ರದಲ್ಲಿನ ಬಣ್ಣಗಳ ಪ್ರಭಾವ ಹಿಂದಿನ ಹೊಸ ಭೂಶೋಧನಾ ಕಾಲವನ್ನು ಜೀವಂತಗೊಳಿಸುತ್ತದೆ. ಹಸುರು ದ್ವೀಪಗಳ ಮಧ್ಯೆ ನೀಲಿ ಕಡಲಲ್ಲಿ ವೈಕಿಂಗ್‍ಗಳ ಉದ್ದನೆಯ ದೋಣಿ ಚಲಿಸುತ್ತಿದೆ; ಸಮುದ್ರದ ಬಿಳಿವಕ್ಕಿಗಳು ಕಲರವಗೈಯುತ್ತ ದೋಣಿಗಳ ಮೇಲೆ ಹಾರುತ್ತಿವೆ. ಜನಪದ ಕಲೆಯ ಕೆಲವು ವೈಶಿಷ್ಟ್ಯಗಳನ್ನು ಬಳಸಿಕೊಂಡು ಇಲ್ಲಿ ರರಿಕ್ ಹೆಚ್ಚು ಭವ್ಯವಾದ ಆಲಂಕಾರಿಕ ವರ್ಣಸಂಯೋಜನೆಯ ಕರತಿ ರಚಿಸಿದ್ದಾನೆ.

	1901ರಲ್ಲಿ ರಷ್ಯಕ್ಕೆ ಹಿಂದಿರುಗಿದ ರರಿಕ್ ಸ್ಲಾವನಿಕ್ ವಿಷಯಗಳ ಮೇಲೆ ಕೃತಿ ರಚಿಸುವುದನ್ನು ಮುಂದುವರಿಸಿ ಸ್ಮಾಲ್‍ಟೌನ್ (1902, ಆರ್.ಎಂ.), ಅಲೆಕ್ಸಾಂಡರ್ ನೆವ್‍ಸ್ಕಿ ಸ್ಟ್ರೈಕ್ಸ್ ಬರ್‍ಜೆರಾರ್ (1904, ಆರ್.ಎಂ.), ಎ ಟೌನ್ ಈಸ್ ಬಿಲ್ಸ್ (1902, ಟಿ.ಜಿ.) ದಿ ನೀಪರ್‍ಸ್ಲಾವ್ಸ್ (1905, ಆರ್. ಎಂ.) ಮುಂತಾದವನ್ನು ರಚಿಸಿದ. ಇದೇ ಕಾಲದಲ್ಲಿ ರಚಿಸಿದ ಒಮೆನ್ಸ್ ನೆರಳು ಬೆಳಕಿನ ಚಿತ್ರ ಹೆಚ್ಚು ಕುತೂಹಲಕಾರಿ ಎನಿಸಿತು.

	1906ರಲ್ಲಿ ಮತ್ತು 1904 ರ ಬೇಸಗೆ ಕಾಲದಲ್ಲಿ ರರಿಕ್ ತನ್ನ ಪತ್ನಿಸಮೇತ ರಷ್ಯದ ಪುರಾತನ ಪಟ್ಟಣಗಳಿಗೆ ಭೇಟಿ ನೀಡಿ ಅಲ್ಲಿಯ ವಾಸ್ತುಶಿಲ್ಪಗಳನ್ನು, ವರ್ಣಚಿತ್ರ ಮುಂತಾದವುಗಳ ಜೊತೆಗೆ ಜನಪದ ಹಾಗೂ ಪರಂಪರಾಗತ ನೃತ್ಯಗಳನ್ನು ಅಭ್ಯಯಿಸಿ ರಷ್ಯನ್ ವಾಸ್ತುಶಿಲ್ಪ ಕಲೆಯ ಬಗ್ಗೆ 90 ಚಿತ್ರಗಳನ್ನು ರಚಿಸಿದ. ಪುರಾತನ ವಾಸ್ತುಶಿಲ್ಪದ ಬಗ್ಗೆ ಈತನಿಗಿದ್ದ ತಿಳಿವಳಿಕೆ ಆಸಕ್ತಿ, ಜ್ಞಾನ ಇವನ್ನೆಲ್ಲ ಈ ಚಿತ್ರಗಳಲ್ಲಿ ಕಾಣಬಹುದು. ಇದೇ ಕಾಲದಲ್ಲಿ ರಷ್ಯದ ಪುರಾತನಕಾಲದಲ್ಲಿ ಕಲೆಯ ಬಗ್ಗೆ ಲೇಖನಗಳನ್ನು ಬರೆದು ಪ್ರಕಟಿಸಿದ್ದಲ್ಲದೆ ಅವುಗಳ ರಕ್ಷಣೆಗೆ ಕರೆನೀಡಿದ.

	1906ರಲ್ಲಿ ಮಾನವನ ಇತಿಹಾಸ ಪೂರ್ವಕಾಲ ಕುರಿತ ಸರಣಿ ವಿತ್ರಗಳನ್ನು ಈತ ರಚಿಸಲಾರಂಭಿಸಿದ. ದಿ ಸ್ಟೋನ್ ಏಜ್ (1910), ಕೋಸ್ಟಲ್ ಡ್ವಲ್ಲರ್ಸ್, ಮಾರ್ನಿಂಗ್ (1906, ಗಾರ್‍ಲೋಫ್‍ಕ ಚಿತ್ರಶಲೆ), ದಿ ಫೊರ್‍ಫಾದರ್ಸ್ ಆಫ್ ಮ್ಯಾನ್ (1911 ಆರ್.ಎಂ.) ಈತ ತನ್ನ ಅಧ್ಯಾತ್ಮಜ್ಞಾನವನ್ನು ಇಲ್ಲಿ ತೋರಿದ್ದು ಹಿಂದೆ ಗ್ರಾಮಗಳಲ್ಲಿ ಜನ ಹೇಗೆ ಪರಸ್ಪರ ಸೌಹಾರ್ದತೆಯಿಂದ ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದರು ಎಂಬುದನ್ನು ಇಂದಿನ ಬದುಕಿನೊಡನೆ ಹೋಲಿಸಿ ನೋಡುತ್ತ ಹಿಂದಿನವರಿಗೆ ಪ್ರಕೃತಿಯೊಡನಿದ್ದ ಸೌಹಾರ್ದ ಜೀವನ ಚಿತ್ರಣವನ್ನು ನೀಡಿದ್ದಾನೆ.

	ವಿಶ್ವವೇ ದೈವ, ದೈವವೇ ವಿಶ್ವ ಎನ್ನುವ ಪ್ರಕೃತಿಯಾರಾಧಕರಾದ ಹಾಗೂ ಮಾನವ ಜೀವನದ ಮೇಲೆ ಪ್ರಭಾವ ಬೀರುವ ನಿಗೂಢಶಕ್ತಿಗಳಲ್ಲಿ ನಂಬಿಕೆಯಿಟ್ಟ ಪುರಾತನ ಸ್ಲಾವ ಜನರ ನಂಬಿಕೆಯಂತೆ ರರಿಕ್ ಅನೇಕ ಅಪರೂಪದ ಚಾರಿತ್ರಿಕ ಭೂಚಿತ್ರಣಗಳನ್ನು ರಚಿಸಿದ. ದಿ ಹೆರಾಲ್ಡ್ (1914, ಆರ್.ಎಂ.), ಆಸ್ಟ್ರಲ್ ರನೆಸ್ (1912), ಹೆವನ್ಲಿ ಬ್ಯಾಟಲ್ (1909, ಇಂಗ್ಲೆಂಡ್ ಪ್ರತಿ 1912 ಆರ್. ಎಂ) -ಈ ಚಿತ್ರಗಳುತಮ್ಮಲ್ಲಿರುವ ಕಾವ್ಯಮಯ ಹಾಗೂ ಉದ್ವಿಗ್ನತೆ ಮತ್ತು ಕಲ್ಪನೆಯ ಕಥೆಯೊಡನೆ ಇರುವ ಸಂಬಂಧದಿಂದ ಬಹು ಆಕರ್ಷವೆನಿಸಿವೆ. 

	ಒಂದನೆಯ ಮಹಾಯುದ್ಧಪೂರ್ವದಲ್ಲಿ ಕಲಾತ್ಮಕರೂಪದಲ್ಲಿ ರಚಿತವಾದ ಕೃತಿಗಳು ಜಟಿಲವಾದ ಸಾಂಕೇತಿಕ ಕಲ್ಪನೆಯಿಂದ, ವಿಚಿತ್ರ ವಿಷಯಗಳಿಂದ ಗಾಢವಾಗಿ ಚಿತ್ರಿತವಾಗಿವೆ; ದಿ ಸರ್ಪೆಂಟ್ಸ್ ಕ್ರೈ (1913, ಫಾಸ್ಕಾಫ್ ಚಿತ್ರಶಾಲೆ) ಮತ್ತು ಎ ಡೂಮ್ಡ್ ಸಿಟಿ (1914). ಮೊದಲನೆಯದರಲ್ಲಿ ಭವಿಷ್ಯದ ದುರಂತದ ಮುನ್ಸೂಚನೆ ಕಂಡರೆ ಎರಡನೆಯದರಲ್ಲಿ ಭಯಂಕರ ಹೆಬ್ಬಾವಿನ ಹಿಡಿತದಲ್ಲಿರುವ ಬಿಳಿದಾದ ನಗರದ ಚಿತ್ರವಿದೆ.

	ಮಾರಿಸ್ ಮ್ಯಾಟರ್‍ಲಿಂಕ್ ನಾಟಕ ಸಿಸ್ಟರ್ ಬಿಯಾಟ್ರಿಸ್ (1914), ಇಬ್ಬನ್‍ನ ಪೀರ್ ಗೈನ್ಟ್ (1912), ರಿಮ್‍ಸ್ಕಿ ಕೊರಾಸ್ಕಾಫ್‍ನ ದಿ ವುಮನ್ ಆಫ್ ಪಾಸ್ಕಾಫ್ (1909) ಮತ್ತು ಬೊರೊಡಿನ್ ಪ್ರಿನ್ಸ್ ಐಗೊರ್ (1914)-ಇವುಗಳಿಗೆ ವರ್ಣಮಯ ರಂಗಹಿನ್ನಲೆಯನ್ನೂ ರರಿಕ್ ರಚಿಸಿಕೊಟ್ಟ. ಪ್ರತಿಯೊಂದರ ಭಾವಪೂರ್ಣ ಸನ್ನಿವೇಶಕ್ಕನುಗುಣವಾಗಿ ಈತ ಅರ್ಥಪೂರ್ಣ ವರ್ಣವಿನ್ಯಾಸ ರೂಪಿಸಿದ್ದ. ಪುರಾತನ ಸ್ಲಾವ್ ಜನಾಂಗದ ಮೇಲೆ ಅವಲಂಬಿಸಿದ ಸ್ಟ್ರಾವಿನ್‍ಸ್ಕಿಯ ದಿ ರೈಟ್ ಆಫ್ ಸ್ಪ್ರಿಂಗ್ (1913) ಬ್ಯಾಲೆಗೆ ಸಂಗೀತವನ್ನೂ ರಚಿಸಿಕೊಟ್ಟ.

	ಈತ ಅನೇಕ ಕಟ್ಟಡ ಮತ್ತು ಚರ್ಚುಗಳಿಗೆ ವಿವಿಧ ಚಿತ್ರಗಳನ್ನು ರಚಿಸಿ ಅವುಗಳನ್ನು ಅಲಂಕರಿಸಿದ್ದಾನೆ. ಇವುಗಳಲ್ಲಿ ತಲಾಸ್ಕಿನೋದ ಹೋಲಿ ಗೋಸ್ಟ್ ಚರ್ಚಿನ (1911) ಬಿತ್ತಿ ಚಿತ್ರಗಳು (ಮೂರಾಲ್ಸ್) ಬಹು ಉತ್ತಮವಾದವು.

	ಕ್ರಾಂತಿಯ ಬಗ್ಗೆ ಸಹಾನುಭೂತಿ ಮನೋಭಾವವುಳ್ಳ ರರಿಕ್ 1917ರಲ್ಲಿ ಸ್ಥಾಪಿಸಿದ ಕಲಾಮಂಡಳಿಗೆ ಅದರ ಅಧ್ಯಕ್ಷ ಮ್ಯಾಕ್ಸಿಂ ಗಾರ್ಕಿಯ ಆಹ್ವಾನದ ಮೇಲೆ ಸೇರಿದ. ಶ್ವಾಸಕೋಶದ ತೊಂದರೆಯಿಂದಾಗಿ ರರಿಕ್ 1917 ಮೇನಲ್ಲಿ ಕರೀಲೀಯದ ಇಸ್ತಮಸ್‍ಗೆ ಹೋದ, ಅದೇ ವರ್ಷದಲ್ಲಿ ರಷ್ಯ ಇಂಟರ್‍ವೆನ್ಸ್ ನಿಷ್ಟಗಳಿಂದ ಆಕ್ರಮಣಕ್ಕೆ ಒಳಗಾಗಿ ಈತ ವಿದೇಶಕ್ಕೆ ಪಯಣಿಸಿದ.

	ಈತ 1918ರಲ್ಲಿ ಫಿನ್ಲೆಂಡ್, ನಾರ್ವೆ, ಡೆನ್ಮಾರ್ಕ ಮತ್ತು ಇಂಗ್ಲೆಂಡಿನಲ್ಲಿ ಪ್ರವಾಸಮಾಡಿ ಅಲ್ಲಿ ತನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ. 1920ರಲ್ಲಿ ಅಮೆರಿಕಕ್ಕೆ ಹೋದ. ಅಲ್ಲಿ ಈತನ ಕೃತಿಗಳಿಗೆ ಹೆಚ್ಚು ಮೌಲ್ಯ ದೊರೆಯಿತು. ಅಮೆರಿಕದಲ್ಲಿ ರಷ್ಯನ್ ಕಲೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಈತ ಅಲ್ಲಿ ಕಲಾವಿಶ್ವವಿದ್ಯಾಲಯವನ್ನು ಕಲೆಗಾರರ ಸಂಘವನ್ನೂ ಮತ್ತು ದಿ ಕ್ರೌನ್ ಆಫ್ ದಿ ವಲ್ರ್ಡ್ ಎಂಬ ಅಂತಾರಾಷ್ಟ್ರೀಯ ಕಲಾಕೇಂದ್ರವನ್ನು ಸ್ಥಾಪಿಸಿದ. ಈತನ ಮುಖ್ಯ ಉದ್ದೇಶ ವಿವಿಧ ದೇಶಗಳ ನಡುವೆ ಸಂಸ್ಕøತಿಯ ಪರಸ್ಪರ ಸಹಯೋಗವನ್ನು ಅಭಿವೃದ್ಧಿಪಡಿಸುವುದಾಗಿತ್ತು. ಈತನನ್ನು ಮೆಚ್ಚಿಕೊಂಡಿದ್ದ ಕೆಲವರು 1923 ರಲ್ಲಿ ರರಿಕ್ ಕಲಾಶಾಲೆಯೊಂದನ್ನು ಸ್ಥಾಪಿಸಿದರು.

	ಇದೇ ವರ್ಷದಲ್ಲಿ ರರಿಕ್ ಅಮೆರಿಕವನ್ನು ಬಿಟ್ಟು ಇಟಲಿ ಮತ್ತು ಸ್ವಿಟ್‍ಜûರ್‍ಲೆಂಡ್ ಮೂಲಕ ಫ್ರಾನ್ಸ್‍ಗೆ ಹೋದ. ಬಹುದಿನದ ಈತನ ಕನಸಾಗಿದ್ದ ಭಾರತ ಹಾಗೂ ಮಧ್ಯೇಷ್ಯಾದ ಪ್ರವಾಸಕ್ಕೆ ಫ್ರಾನ್ಸಿನಿಂದ ಪೂರ್ವಾಭಿಮುಖ ಪ್ರಯಾಣಿಸಿದ. ಐದು ವರ್ಷಗಳ ಪ್ರವಾಸದ ಬಳಿಕ ಈತನ ತಂಡ ಹಿಮಾಲಯವನ್ನು ದಾಟಿ ಮಧ್ಯ ಏಷ್ಯಾದ ಅಪೂರ್ವ ಸ್ಥಳಗಳನ್ನು ಕುಂಚದಲ್ಲಿ ಸೆರೆಹಿಡಿದು 1926ರ ಮೇ ನಲ್ಲಿ ಸೋವಿಯತ್ ಒಕ್ಕೂಟ ಪ್ರದೇಶವನ್ನು ಪ್ರವೇಶಿಸಿ ಮಾಸ್ಕೊದಲ್ಲಿ ಆಗ ಸಾಂಸ್ಕøತಿಕ ಸಚಿವನಾಗಿದ್ದ ಲೂನ ಚರಸ್ಕಿಯನ್ನು ಭೇಟಿಯಾಗಿ ತನ್ನ ಕೆಲವು ಕೃತಿಗಳನ್ನು ನೀಡಿದ. ಅನಂತರ ಬೇಸಗೆಯಲ್ಲಿ ಆಲ್ಟೈಪರ್ವತ ಶ್ರೇಣಿಗೆ ಹೋಗಿ, ಅಲ್ಲಿಂದ ಸೈಬೀರಿಯ ಮೂಲಕ ಮಂಗೋಲಿಯ, ಮುಂದೆ ಗೋಬಿ ಮರುಭೂಮಿ ದಾಟಿ ಸೈಡಾಮ್, ಟಿಬೆಟ್ಗಳನ್ನು ದಾಟಿ ಮತ್ತೆ ಹಿಮಾಲಯದ ಮೂಲಕ ತನ್ನ ಪ್ರಾರಂಭಿಕ ನೆಲೆಯಾಗಿದ್ದ ಡಾರ್ಜಲಿಂಗ್‍ಗೆ ಬಂದ. ಪ್ರಯಾಣದ ಕಾಲದಲ್ಲಿ ಅನೇಕ ಕಷ್ಟನಷ್ಟಗಳನ್ನು ಎದುರಿಸಬೇಕಾಯಿತು. ಹಾಗೇ ಹೆಚ್ಚಿದ ಶೀತಗಾಳಿಯಿಂದ ರಕ್ಷಣೆ ಪಡೆಯಲು ಟಿಬೆಟ್‍ನ ಪರ್ವತದಲ್ಲಿ ತಂಗಬೇಕಾಯಿತು. ಆಗ ಚಳಿ ಹಾಗೂ ಹಸಿವಿನಿಂದ ಸಾಯುವ ಪರಿಸ್ಥಿತಿಯುಂಟಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ರರಿಕ್ ಕುಂಚಿಸುವುದನ್ನು ಬಿಡಲಿಲ್ಲ. ಇದರ ಫಲವಾಗಿ ರೇಖಾಚಿತ್ರಗಳೂ ಸೇರಿದಂತೆ ಸುಮಾರು ಐದುನೂರು ಚಿತ್ರಗಳು ಬೆಳಕಿಗೆ ಬಂದವು. ರರಿಕ್ ತಾನು ಭೇಟಿನೀಡಿದ ಪ್ರದೇಶಗಳಲ್ಲೆದರ ಆಚರಣೆಗಳು, ಸಂಸ್ಕøತಿ, ಜೀವನಪದ್ಧತಿ, ಪುರಾತನ ಗ್ರಂಥಗಳು, ಧರ್ಮ ಮುಂತಾದವುಗಳ ವೈಜ್ಞಾನಿಕ ಅಭ್ಯಾಸ ಮಾಡಿದ್ದು ಕೂಡ ಗಣನೀಯವಾದುದ್ದು. ರರಿಕ್ ತನ್ನ ಸಂಗ್ರಹದ ವಿವರವಾದ ಅಭ್ಯಾಸಕ್ಕೆ ಕುಲು ಕಣಿವೆಯಲ್ಲಿ ಹಿಮಾಲಯನ್ ಇನ್-ಸ್ಟಿಟ್ಯೂಟ್ ಫಾರ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯನ್ನು 1928ರಲ್ಲಿ ಸ್ಥಾಪಿಸಿದ. 1930ರಲ್ಲಿ ಸ್ವಲ್ಪ ಕಾಲ ಅಮೆರಿಕಕ್ಕೆ ಹೋಗಿಬಂದು ತನ್ನ ಕುಟುಂಬಸಮೇತ ಕುಲು ಕಣಿವೆಯಲ್ಲಿ ಖಾಯಂ ಆಗಿ ನೆಲಸಿದ. ಭಾರತದ ಕಲಾವಿದರು ಮತ್ತು ರಾಜಕೀಯ ಮುಖಂಡರು ಇಲ್ಲಿಗೆ ಭೇಟಿ ನೀಡಿ ಇವನನ್ನು ಸಂಧಿಸುತ್ತಿದ್ದರು.

	ಭಾರತದಲ್ಲಿ ರರಿಕ್ ವಿವಿಧ ಬಗೆಯ ಚಿತ್ರಗಳನ್ನು ರಚಿಸಿದ. 1920ರಲ್ಲಿ ಒಂದು ಸುತ್ತಿನಲ್ಲಿ ರಚಿಸಿದ ಚಿತ್ರಗಳು ನೇರವಾಗಿ ಪೌರಾತ್ಯ ಸಂಸ್ಕøತಿಯ ಮತ್ತು ನಿಯಮಾವಳಿಯ ಸಮಸ್ಯೆಗಳನ್ನು ಕುರಿತವಾಗಿದ್ದವು. ಶಾಶ್ವತವಾದ ನೀತಿಬೋಧಕರೆಂದು ರರಿಕ್ ಗೌರವಿಸುತ್ತಿದ್ದ ಮೊಹಮ್ಮದ್, ಬುದ್ಧ, ಕ್ರೈಸ್ತ, ಕನ್‍ಫ್ಯೂಷಸ್ ಮತ್ತು ಲಾವೊಟ್ಸೆ ಇವರ ಚಿತ್ರಗಳನ್ನು ರಚಿಸಿದ. ಈ ಸುತ್ತಿನ ಚಿತ್ರಗಳಿಗೆ ಸಂಬಂಧಿಸಿದಂತೆ ಕಂಪ್ಯಾಶನ್ ಮತ್ತು ಮಡೊನ್ನ ಧಾರ್ಮಿಕ ಚಿತ್ರಗಳೆನಿಸಿದವು. ದಿ ಅಡ್ವೆಂಟ್ ಆಫ್ ಟೈಮ್ ಎಂಬ ಚಿತ್ರ ರರಿಕ್ ಚಿತ್ರದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಇದು ಲೆನಿನ್‍ನ ತಲೆಯ ಹೋಲಿಕೆಯುಳ್ಳ ಒಬ್ಬ ಬುದ್ದಿಜೀವಿಯ ತಲೆಯ ಚಿತ್ರಣವಾಗಿದೆ. ಈ ಚಿತ್ರದಲ್ಲಿ ಪೂರ್ವ ದಿಕ್ಕಿನ ಜನರ ಸ್ವಾತಂತ್ರ್ಯದ ಕಲ್ಪನೆಯನ್ನು ರಷ್ಯದ ಸ್ವಾತಂತ್ರ್ಯದ ಹರಿಕಾರನ ಜೊತೆ ಹೋಲಿಸಲಾಗಿದೆ.

	ತತ್ತ್ವಜ್ಞಾನದ ಆಳವಾದ ಆವರಣವಿರುವ ಭೂ ಮೇಲ್ಮೈಯನ್ನು ರರಿಕ್ ತನ್ನ ಜೀವಿತದ ಕೊನೆಯ ಇಪ್ಪತ್ತು ವರ್ಷಗಳಲ್ಲಿ ಚಿತ್ರಿಸಿದ. ಅವುಗಳಲ್ಲಿ ಮಹೋನ್ನತ ಪ್ರಕೃತಿಯ ಸೌಂದರ್ಯವನ್ನು ಭವ್ಯತೆಯೊಡನೆ ಸೆರೆಹಿಡಿದ.

	ರರಿಕ್ ಆರುನೂರಕ್ಕೂ ಹೆಚ್ಚು ಪೂರ್ವಹಿಮಾಲಯದ ದೃಶ್ಯಾವಳಿಗಳನ್ನು ಚಿತ್ರಿಸಿದ್ದಾನೆ. ಇದನ್ನು ಮೇರುಗಿರಿಯ ಮಹಾಕಾವ್ಯವೆನ್ನಬಹುದು. ಇವುಗಳಲ್ಲಿ ರಿಮೆಂಬರ್ (1945, ಆರ್.ಎಂ) ದಿ ಹಿಮಾಲಯಾಸ್, ಗ್ಲೇಸಿಯರ್ಸ್ (1937, ಆರ್ ಎಂ.) ಮತ್ತು ದಿ ಹಿಮಾಲಯಾಸ್, ನಂದಾದೇವಿ (1941, ಆರ್.ಎಂ.) ಇವು ಸೇರಿವೆ. ಕಲಾವಿದನ ಕಲೆಯ ಆವಿಷ್ಕಾರಕ್ಕೆ ಹೆಚ್ಚು ಪ್ರಭಾವ ಹಾಗೂ ಅನುವು ನೀಡುವ ಟೆಂಪರ್ ಎಂಬ ಸೂತ್ರದಂತೆ ಮೇಲ್ಕಂಡ ಚಿತ್ರಗಳನ್ನು ರಚಿಸಲಾಗಿದೆ.

	ದಿ ಸ್ಟ್ರಾಂಗ್ ಹೋಲ್ಡ್ ಆಫ್ ಟಿಬೆಟ್ ಎಂಬ ಚಿತ್ರಚಕ್ರದಲ್ಲಿ ರರಿಕ್ ಭೂ ದೃಶ್ಯಗಳನ್ನು ಪೂರ್ವದ ಪುರಾತನ ವಾಸ್ತುಶಿಲ್ಪ ಸ್ಮಾರಕಗಳನ್ನು ಒಗ್ಗೂಡಿಸಿ ಸಮರಸವಾಗಿ ಚಿತ್ರಿಸಿದ. ಲ್ಹಾಸ (1942, ಆರ್.ಎಂ.), ಸ್ತೂಪ ಲಡಕ್ (1941, ಆರ್. ಎಂ.) ಟಿಬೆಟನ ಮೊನಾಸ್ಟ್ರಿ (1942 ಆರ್.ಎಂ.) ಮತ್ತು ರಾಯಲ್ ಮೊನಾಸ್ಟ್ರಿ; ಟಿಬೆಟ್ (1932, ಟಿ.ಜಿ.) ರರಿಕ್‍ನಿಂದ ರಚಿಸಲ್ಪಟ್ಟ ಕಲಾತ್ಮಕ ಸ್ಮಾರಕಗಳು ಕೆಲಮೊಮ್ಮೆ ಪುರಾತನ ನಂಬಿಕೆಗಳೊಡನೆ ಸಂಬಂಧಿಸಿದ್ದು ಸಾಂಕೇತಿಕ ಅರ್ಥಗಳನ್ನೂ ಒಳಗೊಂಡಿವೆ. ಉದಾಹರಣೆಗೆ ಭುವಿಗೆ ಸುಖಶಾಂತಿ ತರುವ ಗುರಿಯುಳ್ಳವನಾದ ಮುಂದಿನ ಬುದ್ದಾವತಾರಿ ಮೈತ್ರೇಯನ ಸರಣಿ ಚಿತ್ರಗಳು. ರರಿಕ್ ತನ್ನ ಅನೇಕ ಚಿತ್ರಗಳಲ್ಲಿ ಭಾರತದ ಮಹಾನ್ ಅವತಾರಗಳಾದ ಬುದ್ಧ ಮತ್ತು ಕೃಷ್ಣರನ್ನು ಚಿತ್ರಸಿದ್ದಾನೆ.

	ಈತನಿಗೆ ಜನಸಾಮಾನ್ಯರ ಶಾಸ್ತ್ರ, ಸಂಪ್ರದಾಯಗಳಲ್ಲೂ ಆಸಕ್ತಿಯಿತ್ತು. ಲೈಟ್ಸ್ ಆನ್ ದಿ ಗ್ಯಾನ್‍ಜೆಸ್ ಎಂಬ ಈತನ ಕಲಾತ್ಮಕ ಚಿತ್ರದಲ್ಲಿ ಪುರಾತನ ರೀತಿಯಲ್ಲಿ ಭವಿಷ್ಯ ಹೇಳುವುದನ್ನು ಚಿತ್ರಿಸಿದ್ದಾನೆ. ಕಪ್ಪು ನೀಲಿ ಬೆಳಕಿನ ಮಂಜಿನಲ್ಲಿ ಹೆಂಗಸೊಬ್ಬಳು ದೀಪವನ್ನು ಹಚ್ಚಿ ನೀರಿನಲ್ಲಿ ತೇಲಿಬಿಟ್ಟು ಅವುಗಳ ಚಲನೆಯಲ್ಲಿ ತನ್ನ ಭವಿಷ್ಯ ಕಂಡುಕೊಳ್ಳಲು ನಿಂತಿದ್ದಾಳೆ. ಇಂತಹ ಚಿತ್ರಗಳಲ್ಲಿ ರರಿಕ್ ತನಗೆ ಪ್ರಿಯವಾದ ಸ್ಥಳೀಯ ವರ್ಣಗಳಲ್ಲಿ ಸಂವೇದನಾತ್ಮಕತೆಯನ್ನು ಅಭಿವ್ಯಕ್ತಿಸಿದ್ದಾನೆ.

	ಈತ ಸಾರ್ವಜನಿಕ ಜೀವನದಲ್ಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿದ್ದು, ನಲವತ್ತು ಅಂತಾರಾಷ್ಟ್ರೀಯ ಸಾಂಸ್ಕøತಿಕ ಸಂಘದಲ್ಲಿ ಸದಸ್ಯನಾಗಿದ್ದ. ಈತನ ಬಹು ಮುಖ್ಯವಾದ ಕಾರ್ಯಗಳಲ್ಲಿ `ರರಿಕ್ ಒಪ್ಪಂದ ಒಂದು ದೇಶದೇಶಗಳ ನಡುವೆ ಯುದ್ಧ ನಡೆದಾಗ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಒಪ್ಪಂದವಾಯಿತು. 39 ದೇಶಗಳು ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದವು.

	ರರಿಕ್‍ಗೆ ವಿಶ್ವಕವಿ ರವೀದ್ರನಾಥ ಟಾಗುರ್ ಅವರ ಸಖ್ಯವಿತ್ತು. ಭಾರತದ ಹಿಂದಿನ ಪ್ರಧಾನಿ ನೆಹರೂ ಅವರೂ ಈತನನ್ನು ಮೆಚ್ಚಿಕೊಂಡಿದ್ದರು. ಮೈಸೂರಿನ ಜಗನ್ಮೋಹನ ಚಿತ್ರಶಾಲೆಯಲ್ಲಿ ರರಿಕ್‍ನ ಪುತ್ರ ಯೂರಿ ಸ್ಟೆತ್ ಸ್ಲಾವ್ ರರಿಕ್‍ನ ಚಿತ್ರಗಳಿವೆ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲೂ ರರಿಕ್‍ನ ಕಲಾ ಕೃತಿಗಳ ಸಂಗ್ರಹವಿದೆ. ಮೈಸೂರು ದಸರಾ ವಸ್ತು ಪ್ರದರ್ಶನದ ಕಲಾವಿಭಾಗದಲ್ಲಿ ಒಮ್ಮೆ ಪ್ರದರ್ಶನವಾಗಿದ್ದ ರರಿಕ್‍ನ ಚಿತ್ರವೊಂದನ್ನು ಕವಿ ಕುವೆಂಪು ನೋಡಿ ಮೆಚ್ಚಿಕೊಂಡು ಅದರ ಮೇಲೆ ಕವನ ಒಂದನ್ನು ರಚಿಸಿದರೆಂದು ತಿಳಿದುಬರುತ್ತದೆ.

	1947 ಡಿಸೆಂಬರ್ 13ರಂದು ಈ ಮಹಾನ್ ಕಲಾವಿದ ಭಾರತದಲ್ಲಿ ನಿಧನನಾದ. ಕುಲು ಕಣಿವೆಯಲ್ಲಿ ಈತನ ಸಮಾಧಿಯ ಮೇಲೆ `ಇಲ್ಲಿ ದಿನಾಂಕ 13 ಡಿಸೆಂಬರ್ 1947 ರಂದು ಭಾರತದ ಮಹಾನ್ ರಷ್ಯನ್ ಗೆಳೆಯರಾದ ನಿಕೊಲಾಯ್ ರರಿಕ್ ಅವರ ದೇಹವನ್ನು ಸಮಾಧಿ ಮಾಡಲಾಗಿದೆ ಎಂದು ಬರೆಯಲಾಗಿದೆ. ಹತ್ತು ವರ್ಷಗಳ ಬಳಿಕ ಇವನ ಮಗ ಯೂರಿ ತನ್ನ ತಂದೆ ತಾಯ್ನಾಡಿಗೆ ಕೊಟ್ಟುಹೋದ ಅಮೂಲ್ಯ ಆಸ್ತಿಯಾದ ಕಲಾಕೃತಿಗಳ ದೊಡ್ಡ ಸಂಗ್ರಹದೊಡನೆ ರಷ್ಯಕ್ಕೆ ಹಿಂದಿರುಗಿದ.
(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ